Wednesday, September 25, 2024
spot_img

ಪ್ರಜಾ ಜಾಗೃತಿ ವೇದಿಕೆ ಲೋಕಾರ್ಪಣೆ

ಶಿವಮೊಗ್ಗ: ಸಂಘಟನೆಯಲ್ಲಿ ಬಲವಿದೆ. ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದರೆ ಸಂಘಟನೆ ಅವಶ್ಯಕ. ಇಂದು ಉದ್ಘಾಟನೆಗೊಂಡಿರುವ ‘ಪ್ರಜಾ ಜಾಗೃತಿ ವೇದಿಕೆ’ ಸಮಾಜದಲ್ಲಿ ಬದಲಾವಣೆ ಮಾಡುವ ಕೆಲಸದಲ್ಲಿ ಯಶಸ್ವಿಯಾಗಲಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕತರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರೂ ಆದ ಡಾ. ಮಾತಾ ಬಿ. ಮಂಜಮ್ಮ ಜೋಗುತಿ ಹೇಳಿದರು.
ಅವರು ಇಂದು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾ ಜಾಗೃತಿ ವೇದಿಕೆ (ರಿ.)’(ಜಾಗೃತ ಪ್ರಜೆಗಳ ಒಕ್ಕೂಟ) ಸಂಘಟನೆಯ ಉದ್ಘಾಟನೆ ಮಾಡಿ ಮಾತನಾಡಿದರು.

ಒಳ್ಳೆಯ ಕೆಲಸ ಮಾಡುವಾಗ ಹಲವರು ಹಲವು ರೀತಿಯ ಟೀಕೆಗಳನ್ನು ಮಾಡುತ್ತಾರೆ. ಅವುಗಳಿಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಕೆಲ ಉದಾಹರಣೆಗಳ ಮೂಲಕ ಸಂಘಟಕರಿಗೆ ತಿಳಿ ಹೇಳಿದ ಅವರು, ಸಂಘಟನೆಯ ಕೆಲಸಗಳನ್ನು ಶ್ರದ್ಧೆ, ಭಕ್ತಿ ಹಾಗೂ ಸಮಯಪ್ರಜ್ಞೆಯಿಂದ ಮಾಡಬೇಕೆಂದು ಸಲಹೆ ನೀಡಿದರು.
ಪ್ರಜಾ ಜಾಗೃತಿ ವೇದಿಕೆ ಮುಖ್ಯವಾಗಿ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡಲಿ, ಸಂಘಟನೆಯ ಸದಸ್ಯರು ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಅವರಲ್ಲಿ ಸಂಸ್ಕಾರ ಬಿತ್ತುವ ಕೆಲಸ ಮಾಡಲಿ. ಮಕ್ಕಳಲ್ಲಿ ಸಂಸ್ಕಾರ ಬರಬೇಕೆಂದರೆ ಮಾತೃಭಾಷೆಯಲ್ಲಿ ಶಿಕ್ಷಣಕೊಡಿಸಬೇಕೆಂದರು.

ಮಕ್ಕಳು ಮೊಬೈಲ್ ಅನ್ನು ತಲೆ ತಗ್ಗಿಸಿ ನೋಡುತ್ತಿದ್ದರೆ ಜೀವನವಿಡೀ ತಲೆತಗ್ಗಿಸಿಕೊಂಡೇ ಇರುತ್ತಾರೆ. ಅವರಲ್ಲಿ ಓದುವ ಪ್ರವೃತ್ತಿ ರೂಢಿಸಬೇಕು. ಪತ್ರಿಕೆಗಳನ್ನು, ಅಂಬೇಡ್ಕರ್, ಗಾಂಧೀಜಿ, ಸುಭಾಷ್ ಚಂದ್ರಬೋಸ್‍ರವರಂತಹ ಮಹನೀಯರ ಜೀವನ ಚರಿತ್ರೆಗಳನ್ನು, ರಾಮಾಯಣ-ಮಹಾಭಾರತ ಮೊದಲಾದ ಗ್ರಂಥಗಳನ್ನು ಓದಿಸಿದಲ್ಲಿ ಅವರು ಜಗತ್ತಿನಲ್ಲಿ ಎಲ್ಲ ಕಡೆಯೂ ತಲೆಯೆತ್ತಿ ನಡೆಯುತ್ತಾರೆ, ಮಾತನಾಡುತ್ತಾರೆ. ಸಮಾಜದಲ್ಲಿ ಅಧ್ಯಕ್ಷ-ಸದಸ್ಯ ಎಂಬ ಬೇಧ ಇರುವುದಿಲ್ಲ. ಈ ವೇದಿಕೆಯಲ್ಲಿ ಹೆಣ್ಣು-ಗಂಡು ಹಾಗೂ ತೃತೀಯ ಲಿಂಗಿಯಾದ ನಾನೂ ಇದ್ದೇನೆ ಎಂದರು.
ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೇವರಿದ್ದಾನೆ. ಮನುಷ್ಯನನ್ನು ಮನುಷ್ಯ ನೋಯಿಸಿದಾಗ ಶಾಪ ತಟ್ಟುತ್ತದೆಯೇ ಹೊರತು, ಯಾವ ಋಷಿಗಳು ಕೊಟ್ಟ ಶಾಪ ಫಲಿಸುವುದಿಲ್ಲ. ಸಮಾಜದಲ್ಲಿ ಲಿಂಗ ಕುರಿತು ತಾರತಮ್ಯ ಮಾಡಬಾರದು. ಸಂಘಟನೆಯು ತೃತೀಯ ಲಿಂಗಿಗಳನ್ನೂ ಮುಖ್ಯವಾಹಿನಿಯಲ್ಲಿ ನಡೆಸುವ ಕಾರ್ಯವನ್ನು ಮಾಡಬೇಕು. ಆಗ ತೃತೀಯ ಲಿಂಗಿಗಳು ಟೋಲ್‍ಗಳಲ್ಲಿ, ಸರ್ಕಲ್‍ಗಳಲ್ಲಿ, ಭಿಕ್ಷಾಟನೆ ಕೊನೆಗೆ ಲೈಂಗಿಕ ವೃತ್ತಿಯಲ್ಲೂ ಕಂಡುಬರುವುದಿಲ್ಲ. ತೃತೀಯ ಲಿಂಗಿಗಳನ್ನು ಮೊದಲು ಅವರ ಮನೆಯವರು ಒಪ್ಪಿಕೊಳ್ಳಬೇಕು. ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಅವರು ಭಾವುಕರಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ನರಸಿಂಹ ಗಂಧದ ಮನೆ ಮಾತನಾಡಿ, ಕಳೆದ 20 ವರ್ಷಗಳ ಹಿಂದೆಯೇ ಇಂತಹದ್ದೊಂದು ವೇದಿಕೆಯನ್ನು ಸ್ಥಾಪಿಸಬೇಕೆಂಬ ಬಯಕೆ ನಮ್ಮದಾಗಿತ್ತು. ಹಲವು ಕಾರಣಗಳಿಂದ ಅದು ಆಗಿರಲಿಲ್ಲ. ಕಳೆದ 7 ತಿಂಗಳ ಹಿಂದೆ ಬೇರೆ ಬೇರೆ ಪಕ್ಷಗಳಲ್ಲಿರುವ ವಿವಿಧ ವೃತ್ತಿಗಳನ್ನು ಮಾಡುತ್ತಿರುವ 100 ಜನ ಸ್ನೇಹಿತರು ಸೇರಿಕೊಂಡು ವೇದಿಕೆಯನ್ನು ನೊಂದಾಯಿಸಿಕೊಂಡಿದ್ದು, ಇಂದು ಉದ್ಘಾಟನೆಗೊಳ್ಳುತ್ತಿದೆ ಎಂದರು.
ವೇದಿಕೆಯ ಉದ್ದೇಶ ಸಂಘಟನೆಯೇ ಬದುಕಲ್ಲ. ಸಂಘಟನೆಯಲ್ಲಿರುವವರೆಲ್ಲಾ ಬೇರೆ ಬೇರೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಘಟನೆಯ ಕೆಲಸಗಳಿಗೆ ಯಾವುದೇ ರೀತಿಯ ವಂತಿಕೆಯನ್ನು ಸಂಗ್ರಹಿಸದೇ ಸದಸ್ಯರೇ ವೈಯಕ್ತಿಕವಾಗಿ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತೇನೆ. ಸಮಾಜಮುಖಿ ಕೆಲಸಗಳನ್ನು ಮಾಡಲು ಈ ವೇದಿಕೆ ಸ್ಥಾಪಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸದಸ್ಯರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಉಪಮೇಯರ್ ಹೆಚ್. ಫಾಲಾಕ್ಷಿ, ಪ್ರಮುಖರಾದ ಕಡಿದಾಳ್ ಗೋಪಾಲ್, ಕವಿತ ಸಾಗರ್, ದಿವ್ಯ ಪ್ರವೀಣ್, ವಿನಯ್, ವಿನ್ಸೆಂಟ್ ರೋಡ್ರಿಗಸ್, ಮಂಜು ಸೇರಿದಂತೆ ಹಲವರಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles