ಎಲ್ಲರ ಸಹಕಾರದಿಂದ ಡೆಂಗ್ಯೂ ಸೋಲಿಸೋಣ

0
4

ಎಲ್ಲರ ಸಹಕಾರದಿಂದ ಡೆಂಗ್ಯೂ ಸೋಲಿಸೋಣ

 

ಶಿವಮೊಗ್ಗ: ಜಗತ್ತಿನಲ್ಲಿ ಸುಮಾರು 400 ಮಿಲಿಯನ್ ಜನರು ಡೆಂಗ್ಯೂನಿಂದ ಸೋಂಕಿತರಾಗುವ ಸಾಧ್ಯತೆ ಇದೆ. ಡೆಂಗ್ಯೂ ಮಾರಣಾಂತಿಕ ಕಾಯಿಲೆ ಆಗಿದ್ದು, ಸೊಳ್ಳೆಗಳ ನಿಯಂತ್ರಣ ಒಂದೇ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರ. ಆದ್ದರಿಂದ ಪ್ರತಿಯೊಬ್ಬರ ಸಹಕಾರ ಅಗತ್ಯ. ಎಲ್ಲರ ಸಹಕಾರದಿಂದ ಡೆಂಗ್ಯೂ ಸೋಲಿಸೋಣ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದರು.
ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಸೈಕಲ್ ಕ್ಲಬ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ತರುಣೋದಯ ಘಟಕ, ಐಎಂಎ, ರೋಟರಿ ಶಿವಮೊಗ್ಗ ಪೂರ್ವ ಸಹಯೋಗದಲ್ಲಿ ಆಯೋಜಿಸಿದ್ದ ಡೆಂಗ್ಯೂ ಜನಜಾಗೃತಿ, ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಮಾತನಾಡಿ, ಡೆಂಗ್ಯೂ ವೈರಾಣುವಿನಿಂದ ಬರುವ ಜ್ವರವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು ರೋಗದ ಲಕ್ಷಣಗಳಾಗಿದ್ದು, ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.


ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ಮನೆಯ ಒಳಗೆ ಹಾಗೂ ಸುತ್ತಮುತ್ತಲು ಸಂಗ್ರಹವಾಗುವ ನೀರಿನಲ್ಲಿ ಉತ್ಪತ್ತಿ ಆಗುವ ಸೊಳ್ಳೆಗಳು ಡೆಂಗ್ಯೂ ಕಾಯಿಲೆ ಹರಡಲು ಕಾರಣವಾಗುತ್ತವೆ. ತೆಂಗಿನ ಚಿಪ್ಪು, ಹಳೇ ಟೈರ್, ನೀರು ಸಂಗ್ರಹ ಆಗುವ ವಿವಿಧ ಜಾಗ, ಮನೆ ಸುತ್ತಮುತ್ತ ನೀರು ಸಂಗ್ರಹ ಆಗದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆ ಪರದೆ ಬಳಸಬೇಕು. ಮನೆ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಡೆಂಗ್ಯೂ ಹರಡದಿರಲು ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ವಿದ್ಯಾನಗರ, ಬಾಪೂಜಿ ನಗರ ಸೇರಿದಂತೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲಾಯಿತು. ಮೈತ್ರಿ ಕಾಲೇಜ್ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಬಡಾವಣೆಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು.
ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಐಎಂಎ ಅಧ್ಯಕ್ಷ ಡಾ. ಅರುಣ್, ಯೂತ್ ಹಾಸ್ಟೆಲ್‌ನ ವಾಗೀಶ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ಡಾ. ಮಲ್ಲಪ್ಪ, ಕುಮಾರಸ್ವಾಮಿ, ಡಾ. ಉಮಾದೇವಿ, ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.