ನನ್ನ ಗೆಲುವು ನಿಶ್ಚಿತ ಶಾರದಾ ಪುರಯ ನಾಯಕ್ ವಿಶ್ವಾಸ

0
44

ಶಿವಮೊಗ್ಗ: ಕ್ಷೇತ್ರದಾದ್ಯಂತ ಜನರ ಸ್ಪಂದನೆ ಉತ್ತಮವಾಗಿದೆ. ಪಕ್ಷದ ಮುಖಂಡರು ಹಗಲಿರುಳೂ ಶ್ರಮಿಸಿದ್ದು, ಈ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾಪೂರ್ಯಾನಾಯ್ಕ ತಿಳಿಸಿದರು.
ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಮುಗಿಸಿದ್ದು, ನಾಳೆ ಆನವೇರಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಧಾನಿ ಮೋದಿಯವರು ಜಿಲ್ಲೆಗೆ ಬಂದಿದ್ದಕ್ಕೆ ಸ್ವಾಗತ, ಆದರೆ ಇಂದಿನ ಕಾರ್ಯಕ್ರಮವನ್ನು ನನ್ನ ಕ್ಷೇತ್ರದಲ್ಲೇ ಯಾಕೆ ಆಯೋಜಿಸಿದರೋ ಗೊತ್ತಿಲ್ಲ ಎಂದರು.
ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಸ್ಪರ್ಧೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಜನರಿಂದ ಸ್ವಲ್ಪ ದೂರವೇ ಇದ್ದಾರೆ ಎಂದ ಅವರು, ಬಿಜೆಪಿ ಅಭ್ಯರ್ಥಿ ಕೋಳಿ, ಹಣ ಹಂಚಿದ್ದಾರೆ. ಇನ್ನು 48 ಗಂಟೆಯಲ್ಲಿ ಇನ್ನಷ್ಟು ಅಕ್ರಮಗಳು ಎಸಗಬಹುದು. ಆದರೆ ಎಲ್ಲಾ ಸಮುದಾಯಗಳೂ ನನ್ನ ಪರ ಇದೆ. ವಿಶೇಷವಾಗಿ ಲಿಂಗಾಯತ ಸಮುದಾಯ ಅಭಿವೃದ್ಧಿ ಪರ ಇದೆ. ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಎಂದು ಅವರ ಬೆಂಬಲಕ್ಕಿದ್ದರು. ಹಿಂದೆ ನನ್ನನ್ನೂ ಬೆಂಬಲಿಸಿದ್ದರು.ಈ ಬಾರಿಯೂ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಶಾಸಕರಾಗಿ ಆಯ್ಕೆಯಾದ ನಂತರ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರಲ್ಲದೆ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು ನನ್ನ ಕರ್ತವ್ಯ. ಹಿಂದೆಯೂ ದ್ವನಿ ಎತ್ತಿದ್ದೆ, ಮುಂದೆಯೂ ಆ ಬಗ್ಗೆ ದ್ವನಿ ಎತ್ತುತ್ತೇನೆ ಎಂದರು.
ಕ್ಷೇತ್ರ ವಿಶಾಲವಾಗಿದ್ದು ಹೊಸ ತಾಲ್ಲೂಕು ಸ್ಥಾಪನೆಗೆ‌ ನನ್ನ ಅವಧಿಯಲ್ಲಿ ಕಂದಾಯ ಸಚಿವರಿಗೆ ಮನವಿ ಮಾಡಿದ್ದೆ. ಮುಂದೆಯೂ ಪ್ರಯತ್ನಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಕಸೆಟ್ಟಿ, ದಾದಾಪೀರ್, ಕೆ.ಪಿ.ಓಂಕಾರಪ್ಪ, ಕಾಂತರಾಜ್ ಉಪಸ್ಥಿತರಿದ್ದರು.