ರಾಮಿನಕೋಪ್ಪ ಮತ್ತು ಹೋಸಕೋಪ್ಪ ಗ್ರಾಮಗಳ ಮಧ್ಯೆ ಇರುವ ಅಡಿಕೆ ತೋಟದಲ್ಲಿ ಸೋಮವಾರ ರಾತ್ರಿ ಚಿರತೆ ದಾಳಿ ಮಾಡಿದ ಘಟನೆ ಸ್ಥಳೀಯರಲ್ಲಿ ಭಯ ಉಂಟುಮಾಡಿದೆ. ಅಮೃತನೊನಿ ಪ್ಯಾಕ್ಟರಿಗೆ ಹೋಗುವ ಮಾರ್ಗದಲ್ಲಿ ಈ ದಾಳಿ ನಡೆದಿದ್ದು, ಎರಡು ಹಸುಗಳು ಚಿರತೆಗಳ ಹಲ್ಲೆಗೆ ಬಲಿಯಾಗಿವೆ.
ಸ್ಥಳೀಯ ರೈತರ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ ಎರಡು ಚಿರತೆಗಳು ಭಾಗಿಯಾಗಿದ್ದವು. ಅವುಗಳಲ್ಲೊಂದು ಹಸುವನ್ನು ಅರ್ಧವಾಗಿ ತಿಂದು ಅಡಿಕೆ ತೋಟದಲ್ಲಿ ಬಿಟ್ಟಿದ್ದವು. ಈ ಘಟನೆ ರೈತರನ್ನು ತೀವ್ರ ಆತಂಕಕ್ಕೆ ದೂಡಿದ್ದು, ಈಗ ತೋಟದಲ್ಲಿ ಕೆಲಸ ಮಾಡುವಾಗ ಸಹ ಭಯದಿಂದಲೇ ನೌಕರರು ಕೆಲಸ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಚಿರತೆಗಳು ಎಷ್ಟು ಹೊತ್ತಿಗೆ, ಯಾವಾಗ ದಾಳಿ ಮಾಡುತ್ತವೆ ಎಂಬ ಭಯದ ಕಾರಣ, ತೋಟಗಳಲ್ಲಿ ಕೆಲಸ ಮಾಡುವುದು ಅಪಾಯಕಾರಿ ಆಗುತ್ತಿದೆ.
ಈಗಾಗಲೇ ಹಲವು ಬಾರಿ ತೋಟ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಆದರೆ ಯಾವುದೇ ತಕ್ಷಣದ ಕ್ರಮ ಕೈಗೊಳ್ಳದ ಕಾರಣ, ಇದೀಗ ಹಸುಗಳು ಸಾವನ್ನಪ್ಪಿದ ನಂತರ ಮಾತ್ರ ಈ ವಿಷಯ ಗಂಭೀರವಾಗಿ ಗಮನ ಸೆಳೆಯುತ್ತಿದೆ.
ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದು, ಈ ಚಿರತೆಗಳನ್ನು ಬೋನು ಇಟ್ಟು ಸೇರೆ ಹಿಡಿದುಕೊಂಡು ಬೇರೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಭಯದ ವಾತಾವರಣದ ನಡುವೆಯೂ ದಿನನಿತ್ಯ ತಮ್ಮ ತೋಟಗಳಿಗೆ ಹೋಗಬೇಕಾದ ರೈತರು ಮತ್ತು ಕೆಲಸಗಾರರು ಸರ್ಕಾರದ ಮೇಲ್ಮಟ್ಟದಿಂದ ಕೂಡ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಈ ಭಾಗದಲ್ಲಿ ಪಶುಗಳ ಹಾನಿ ಮಾತ್ರವಲ್ಲ, ಮನುಷ್ಯರ ಮೇಲೂ ಅಪಾಯ ತಲೆದೋರಬಹುದು ಎಂಬ ಆತಂಕ ಹಬ್ಬಿದೆ. ಆದ್ದರಿಂದ, ಅರಣ್ಯ ಇಲಾಖೆ ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಮತ್ತಷ್ಟು ದಾಳಿಗಳು ನಡೆಯುವ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.