ಮುಂಬೈ: ರಾತ್ರಿ ವೇಳೆ ಅಪರಿಚಿತ ಮಹಿಳೆಗೆ ‘ನೀವು ನೋಡಲು ಸುಂದರವಾಗಿದ್ದೀರಿ, ಸ್ಲಿಮ್ ಆಗಿದ್ದೀರಿ, ನನಗೆ ನೀವಂದ್ರೆ ಇಷ್ಟ’ ಎಂಬ ಸಂದೇಶಗಳನ್ನು ಕಳುಹಿಸುವುದು ಅಶ್ಲೀಲತೆ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮಾಜಿ ಮಹಿಳಾ ಕಾರ್ಪೊರೇಟರ್ ಒಬ್ಬರಿಗೆ ವಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾ. ಡಿಜಿ ಧೋಬ್ಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂಬೈ ಮಹಿಳಾ ಕಾರ್ಪೊರೇಟರ್ ಗೆ ಆರೋಪಿ ರಾತ್ರಿ 11 ರಿಂದ 12.30 ರ ಸಮಯದಲ್ಲಿ ಸಂದೇಶ ಕಳಿಸುತ್ತಿದ್ದ. ನೀವು ನೋಡಲು ಸುಂದರವಾಗಿದ್ದೀರಿ. ನನ್ನ ವಯಸ್ಸು 40. ನಾನು ನಿಮ್ಮನ್ನ ಇಷ್ಟ ಪಡುತ್ತಿದ್ದೇನೆ. ನಿಮಗೆ ಮದುವೆ ಆಗಿದೆಯಾ? ಎಂಬಿತ್ಯಾದಿ ಸಂದೇಶಗಳನ್ನ ಕಳುಹಿಸಿದ್ದ. ಈ ಬಗ್ಗೆ ಮಹಿಳೆ ದೂರು ದಾಖಲಿಸಿದ್ದು, ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗೆ ಮೂರು ತಿಂಗಳ ಸಜೆ ವಿಧಿಸಿತ್ತು. ಕೋರ್ಟಿನ ನಿರ್ಧಾರ ಪ್ರಶ್ನಿಸಿ ಆರೋಪಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ಸೆಷೆನ್ಸ್ ನ್ಯಾಯಾಲಯ, ಪರಸ್ಪರ ಪರಿಚಯವೇ ಇಲ್ಲದ ಮಹಿಳೆಗೆ ಈ ರೀತಿ ಸಂದೇಶ ಕಳುಹಿಸುವುದು ಮಹಿಳೆಗೆ ಮಾಡಿದ ಅವಮಾನ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.