ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಕರ್ನಾಟಕ ರಾಜ್ಯೋತ್ಸವದ ಶುಭಾಶಯದ ನುಡಿಗಳನ್ನ ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ-ಏಳಿಗೆಗೆ ಶ್ರಮಿಸುವ ಸಂಕಲ್ಪ ಮಾಡಬೇಕಿದೆ. ಯಾವ ಭಾಷೆ ವಿಜ್ಞಾನ-ತಂತ್ರಜ್ಞಾನಗಳೊಂದಿಗೆ ತನ್ನನ್ನು ಬೆಸೆದುಕೊಳ್ಳುತ್ತದೆಯೋ ಆ ಭಾಷೆ ಸಮೃದ್ಧವಾಗುತ್ತದೆ ಮತ್ತು ಜೀವಂತವಾಗಿರುತ್ತದೆ. ಆ ನಿಟ್ಟಿನಲ್ಲಿ ನಮ್ಮ ಬದುಕಿನ ಎಲ್ಲ ಆಯಾಮಗಳೂ ಕನ್ನಡಮಯ ಆಗುವಂತೆ ನಾವೆಲ್ಲರು ಪ್ರಯತ್ನಿಸಬೇಕು. #ವಾಗ್ರಚನೆಯೆಂಬುದು_ಕರ್ಣಾಟವಯ್ಯ ಎಂಬ ಶರಣರ ನುಡಿಗಟ್ಟು ನಮ್ಮ ಮಾತು ಮತ್ತು ಬರಹಗಳೆರಡೂ ಕನ್ನಡ ಎಂಬುದನ್ನು ಸೂಚಿಸುತ್ತದೆ. #ಕುರಿತೋದದೆಯುಂ_ಕಾವ್ಯಪ್ರಯೋಗ_ಪರಿಣತ_ಮತಿಗಳ್ ಎಂಬ ಕವಿರಾಜಮಾರ್ಗದ ಮಾತು ಕನ್ನಡಿಗರ ಭಾಷಾಪ್ರೌಢಿಮೆಯನ್ನು ಮನವರಿಕೆ ಮಾಡಿಕೊಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಆಲೋಚನೆಗಳು ಮೂಡುವುದು ಅವನ ಮಾತೃಭಾಷೆಯಲ್ಲಿಯೇ. ಅವುಗಳ ಶ್ರೇಷ್ಠ ಅಭಿವ್ಯಕ್ತಿ ಸಾಧ್ಯವಾಗುವುದೂ ಮಾತೃಭಾಷೆಯ ಮೂಲಕವೇ. ಆದ್ದರಿಂದ ನಮ್ಮ ಆಲೋಚನೆಗಳ ಮೂಲಕ ನಮ್ಮ ಬದುಕನ್ನು ಪ್ರಭಾವಿಸುವ ನಮ್ಮ ನಾಣ್ಣುಡಿ-ಬಾಳ್ಣುಡಿ ಕನ್ನಡದ ಬಗೆಗಿನ ಅಭಿಮಾನ ಇಮ್ಮಡಿ ಮುಮ್ಮಡಿಯಾಗಿ ಬೆಳೆಯಲಿ. ಎಲ್ಲ ರಂಗಗಳಲ್ಲಿಯೂ ಕನ್ನಡತನ ಮೈಗೂಡುವಂತೆ ರಾಜ್ಯೋತ್ಸವ ಪ್ರೇರಣೆ ನೀಡಲಿ.
ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು.
ಬಸವಕೇಂದ್ರ, ಶಿವಮೊಗ್ಗ.