ಪೊಲೀಸರ ಕಣ್ಣು ತಪ್ಪಿಸಿದ್ರೂ, ಪೊಲೀಸ್ ನಾಯಿ ಕಣ್ಣು ತಪ್ಪಿಸೋಕೆ ಆಗಲ್ಲ ಎಂಬ ಮಾತಂದುಇತ್ತು.
ದಾವಣಗೆರೆ : ಇಷ್ಟು ದಿನ ದೊಡ್ಡ, ದೊಡ್ಡ ನಗರಗಳಲ್ಲಿ ಬ್ಯಾಂಕ್ ದರೋಡೆ ಮಾಡುತ್ತಿದ್ದ ತಂಡ ಈಗ ಸಣ್ಣ ತಾಲೂಕಿಗೆ ಇಳಿದಿದ್ದು, ಜಿಲ್ಲೆಯ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಸದ್ಯ ದರೋಡೆಕೋರ ಪತ್ತೆ ಹಚ್ಚಲು ಡಿಟೆಕ್ವಿವ್ ಡಾಗ್ ‘ತಾರಾ’ ಶೋಧನೆಗೆ ಇಳಿಸಿದ್ದಾರೆ
ಡಕಾಯಿತಿ ಪ್ರಕರಣದ ಗಮನಕ್ಕೆ ಬಂದ ಕೂಡಲೇ ತನ್ನ ತಂಡದೊಂದಿಗೆ ಹೊರಟ ಎಸ್ಪಿ ಉಮಾ ಪ್ರಶಾಂತ್ ಬೆಳ್ಳಂ ಬೆಳ್ಳಗ್ಗೆ ಸ್ಥಳಕ್ಕೆ ಹೋಗಿ ಘಟನಾವಳಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಅಲ್ಲದೇ ಬೆರಳಚ್ಚು ತಂಡ, ಶ್ವಾನದಳವನ್ನು ಸ್ಥಳಕ್ಕೆ ಕರೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐದು ತಂಡ ರಚನೆ
ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಸ್ಥಳ ಪರಿಶೀಲನೆ ಮಾಡಿ ಐದು ತಂಡ ರಚನೆ ಮಾಡಿದ್ದಾರೆ. ಈ ತಂಡ ಎಲ್ಲ ಸಿಸಿಟಿವಿ, ಸ್ಥಳೀಯರಿಂದ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿ ಪಡೆದು ಕಾರ್ಯಾಚರಣೆಗೆ ಇಳಿದಿದೆ. ಈ ನಡುವೆ ಸ್ಥಳೀಯರಿಗೆ ಮನೆಯಲ್ಲಿ ತನ್ನ ಚಿನ್ನ ಹೇಗೆ ರಕ್ಷಿಸಿಕೊಳ್ಳಬೇಕೆಂಬ ಭೀತಿ ಕೂಡ ಎದುರಾಗಿದೆ.
ಡಿಟೆಕ್ವಿವ್ ಡಾಗ್ ‘ತಾರಾ’ ಎಂಟ್ರಿ
ಪೊಲೀಸರ ಕಣ್ಣು ತಪ್ಪಿಸಿದ್ರೂ, ಪೊಲೀಸ್ ನಾಯಿ ಕಣ್ಣು ತಪ್ಪಿಸೋಕೆ ಆಗಲ್ಲ ಎಂಬ ಮಾತಿನಂತೆ ಈಗ ಡಿಟೆಕ್ವಿವ್ ಡಾಗ್ ‘ತಾರಾ’ ಎಂಟ್ರಿ ಕೊಟ್ಟಿದ್ದಾಳೆ. ಆದರೆ ಬ್ಯಾಂಕ್‌ನಲ್ಲಿ ಖಾರದಪುಡಿ ಹಾಕಿದ್ದ ಕಾರಣ ಕೆಲವೇ ದೂರ ಮಾತ್ರ ಅದು ಕ್ರಮಿಸಿ ಸವಳಂಗ ಪೆಟ್ರೋಲ್ ಬಂಕ್ ಬಳಿ ನಿಂತಿದೆ. ಈ ಹಿಂದೆ ಈ ಡಾಗ್ ಕೊಲೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿತ್ತು.
ಏನಿದು ಘಟನೆ
ದರೋಡೆಕೋರರು ಬ್ಯಾಂಕ್‌ನ ಕಿಟಕಿ ಸರಳುಗಳನ್ನು ಮುರಿದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ನ್ಯಾಮತಿ ಪಟ್ಟಣದ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿರಬಹುದು ಎಂಬ ಮಾಹಿತಿ ಇದೆ. ಕಿಟಕಿಯ ಸರಳುಗಳನ್ನು ಮುರಿದು ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಲಾಕರ್ ಒಡೆದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ ಎಂದು ಹೇಳಲಾಗಿದೆ.
ಖಾರಪುಡಿ ಚೆಲ್ಲಿದ ಕಳ್ಳರು
ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿರುವ ಕಳ್ಳರು ಬ್ಯಾಂಕ್‌ನ ಒಳಗಡೆ ಖಾರದಪುಡಿ ಚೆಲ್ಲಿ ಹೋಗಿದ್ದಾರೆ. ಇದರ ಬಗ್ಗೆ ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್, ನ್ಯಾಮತಿ ಪಿಐ ಎನ್.ಎಸ್.ರವಿ ಪಿಎಸ್‌ಐ ಜಯಪ್ಪನಾಯ್ಕ , ದಾವಣಗೆರೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ಮುಂದುವರೆಸಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಹಣ ದರೋಡೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬ್ಯಾಂಕ್‌ನವರ ಅಧಿಕೃತ ಮಾಹಿತಿಯ ನಂತರ ನಿಖರ ಮಾಹಿತಿ ಹೊರ ಬರಬೇಕಿದೆ.