Wednesday, September 25, 2024
spot_img

ಜಿದ್ದಾಜಿದ್ದಿನ ಕ್ಷೇತ್ರ ಶಿವಮೊಗ್ಗದ ಅಭ್ಯರ್ಥಿಗಳ ಬಲಾಬಲ ಹೇಗಿದೆ ಗೊತ್ತಾ..?!

ಶಿವಮೊಗ್ಗ: ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಎರಡು ರಾಷ್ಟ್ರೀಯ ಪಕ್ಷಗಳ ಹಾಗೂ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಯಾವ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವುದು ಸ್ಪಷ್ಟವಾಗಿದ್ದು, ಬಿಜೆಪಿ ಅಭ್ಯರ್ಥಿ ಆಯ್ಕೆಯ ಗೊಂದಲದಿಂದ ಸಪ್ಪೆ ಸಪ್ಪೆಯಾಗಿದ್ದ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಇದೇ ಮೊದಲಬಾರಿಗೆ ಹೈವೋಲ್ಟೇಜ್ ಫೈಟ್ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಎಪಿ ಅಭ್ಯರ್ಥಿಗಳ ನಡುವೆ ಹಣಾಹಣಿ ಏರ್ಪಟ್ಟಿದೆ.
ಕಾಂಗ್ರೆಸ್‍ನಿಂದ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರ ಪುತ್ರ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಸಂಘ ಪರಿವಾರದ ಹಿನ್ನೆಲೆಯ ಕಟ್ಟರ್ ಹಿಂದುತ್ವವಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅಖಾಡಕ್ಕಿಳಿದಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ತೊಡೆ ತಟ್ಟಿದ್ದ ಆಯನೂರು ಮಂಜುನಾಥ್ ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದಾರೆ. ಆಪ್ ಅಭ್ಯರ್ಥಿಯಾಗಿ ಟಿ. ನೇತ್ರಾವತಿ ಕಣದಲ್ಲಿದ್ದಾರೆ.
ಹೆಚ್.ಸಿ. ಯೋಗೀಶ್ ಬಿಜೆಪಿ ಆಡಳಿತದ ವೈಫಲ್ಯಗಳನ್ನು ಜನರ ಮುಂದಿಟ್ಟು ಮತ ಯಾಚನೆಗೆ ತೊಡಗಿದ್ದರೆ, ಮೋದಿ ಸರ್ಕಾರದ ಸಾಧನೆಗಳು, ಹಿಂದುತ್ವದ ಹೆಸರಿನಲ್ಲಿ ಚೆನ್ನಿ ಮತಭೇಟೆಗೆ ಮುಂದಾಗಿದ್ದಾರೆ.
ಆಯನೂರು ಮಂಜುನಾಥ್ ‘ಶಾಂತಿ ಮಂತ್ರ’ ಪಠಿಸುತ್ತಾ ಬಿಜೆಪಿಯ ವೈಫಲ್ಯವನ್ನೂ ನೇರವಾಗಿ ಹೇಳದೇ ಕಾಂಗ್ರೆಸ್ ಅನ್ನು ನೇರವಾಗಿ ಟೀಕಿಸದೇ ‘ಈಶ್ವರಪ್ಪ ವಿರುದ್ಧದ ತಮ್ಮ ಅಸಮಾಧಾನಗಳನ್ನು ಹೇಳುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಎಎಪಿ ಅಭ್ಯರ್ಥಿ ಟಿ. ನೇತ್ರಾವತಿ ಸಹ ದೆಹಲಿ ಸರ್ಕಾರದ ಸಾಧನೆಗಳ ಜೊತೆಗೆ ಶಿವಮೊಗ್ಗದಲ್ಲಿ ನಡೆದ ಅಹಿತಕರ ಘಟನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.
ಹಿಂದುತ್ವವಾದಿ ಎಸ್.ಎನ್. ಚನ್ನಬಸಪ್ಪ:
ಬಿಜೆಪಿ ಅಭ್ಯರ್ಥಿಯಾಗಿರುವ ಎಸ್.ಎನ್. ಚನ್ನಬಸಪ್ಪ ಕಟ್ಟರ್ ಹಿಂದುತ್ವವಾದಿ. ಸಂಘದ ಹಾಗೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ. ಶಿವಮೊಗ್ಗ ಕ್ಷೇತ್ರದ ಮೇಲೆ ಕೆ.ಎಸ್.ಈಶ್ವರಪ್ಪ ಬಲವಾದ ಹಿಡಿತ ಸಾಧಿಸಿದ್ದರೂ ಅವರ ಹಿಂದೆ ಎಸ್.ಎನ್. ಚನ್ನಬಸಪ್ಪನವರಂತಹ ನಿಷ್ಠಾವಂತ ಕಾರ್ಯಕರ್ತರ ಶ್ರಮವೂ ಇತ್ತು.

 

ಎಸ್.ಎನ್.ಚನ್ನಬಸಪ್ಪ ಅವರು ಕೇವಲ ಹತ್ತು ವರ್ಷದ ಹುಡುಗನಾದಾಗಿನಿಂದಲೂ ಜನಸಂಘಕ್ಕೆ ನಿಷ್ಠೆಯನ್ನು ತೋರಿಸುತ್ತಲೇ ಬಂದಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಸಂಘ-ಆರ್.ಎಸ್.ಎಸ್.ನ ಜಾಗೃತಿ ಪತ್ರಗಳನ್ನು ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದರು.
ನಂತರ ಬಿಜೆಪಿಯ ಮತ್ತು ಆರ್.ಎಸ್.ಎಸ್.ನ ಸಕ್ರಿಯ ಕಾರ್ಯಕರ್ತನಾಗಿದ್ದುಕೊಂಡು ಪಕ್ಷ ಅಧಿಕಾರದಲ್ಲಿರಲಿ, ಅಧಿಕಾರದಲ್ಲಿರದಿರಲಿ ಪಕ್ಷಕ್ಕೆ ನಿಷ್ಠೆ ಪ್ರದರ್ಶಿಸುತ್ತಲೇ ಬಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಹಿರಂಗ ಸಭೆಯಲ್ಲಿ ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಲೆ ಕಡಿಯುತ್ತೇವೆ’ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಕೆ.ಎಸ್. ಈಶ್ವರಪ್ಪನವರಂತೆಯೇ ಕಟ್ಟರ್ ಹಿಂದುತ್ವವಾದಿಯಾಗಿರುವ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಉಪಮೇಯರ್ ಹಾಗೂ ಸದಸ್ಯರಾಗಿ, ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ನಗರದಲ್ಲಿ ಎಲ್ಲ ವರ್ಗದ, ಎಲ್ಲ ಸಮುದಾಯದ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗೆಯೇ ಶಿವಮೊಗ್ಗ ಪಾಲಿಕೆಯ ಆಡಳಿತದ ಮೇಲೂ ಬಲವಾದ ಹಿಡಿತ ಇಟ್ಟುಕೊಂಡಿದ್ದಾರೆ. ನಗರಸಭೆ ಸದಸ್ಯರಾಗಿ, ಪಾಲಿಕೆ ಉಪಮೇಯರ್ ಆಗಿ, ಆಡಳಿತ ಪಕ್ಷದ ನಾಯಕರಾಗಿ ಅನುಭವ ಹೊಂದಿದ್ದಾರೆ. ಯಾವುದೆ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡುವ ಚಾತುರ್ಯವಿದೆ. ಪಟ್ಟು ಹಿಡಿದು ಹೋರಾಟ ಮಾಡುತ್ತಾರೆ. ಹೋರಾಟದ ಹಿನ್ನೆಲೆ, ಬಿಜೆಪಿ ಕಾರ್ಯಕರ್ತರ ಬೆಂಬಲವೇ ಗೆಲುವಿಗೆ ಕಾರಣವಾಗುವುದೆಂಬ ನಂಬಿಕೆಯಲ್ಲಿದ್ದಾರೆ.
ವಾಗ್ಮಿ ಆಯನೂರು ಮಂಜುನಾಥ್:
ಆಯನೂರು ಮಂಜುನಾಥ್ ಜನಸಂಘದ ಕಟ್ಟಾಳು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು. ಮುಖ್ಯವಾಗಿ ಕಾರ್ಮಿಕ ಮುಖಂಡರಾಗಿ ಗುರುತಿಸಿಕೊಂಡವರು. ಭಾರತೀಯ ಮಜ್ದೂರ್ ಸಂಘದ ಮೂಲಕ ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

1994ರ ಚುನಾವಣೆಯಲ್ಲಿ ಹೊಸನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1998ರಲ್ಲಿ ಶಾಸಕ ಸ್ಥಾನ್ಕಕೆ ರಾಜೀನಾಮೆ ನೀಡಿ, ಅಂದಿನ ಸೋಲಿಲ್ಲದ ಸರದಾರ ಎನಿಸಿದ್ದ ಎಸ್.ಬಂಗಾರಪ್ಪ ವಿರುದ್ಧ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಮೂಲಕ ಸೋಲಿಲ್ಲದ ಸರದಾರ ಬಂಗಾರಪ್ಪ ಅವರನ್ನು ಮಣಿಸಿದ ಕೀರ್ತಿಗೆ ಪಾತ್ರರಾಗಿದ್ದರು.
ಆದರೆ, ಲೋಕಸಭಾ ಸದಸ್ಯರಾಗಿ ಕೆಲಸ ಮಾಡಲು ಅವರಿಗೆ ಸಿಕ್ಕಿದ್ದು ಕೇವಲ 13 ತಿಂಗಳ ಅವಧಿ ಮಾತ್ರ. ನಂತರದ ಮೂರು ಲೋಕಸಭಾ ಚುನಾವಣೆಗಳಲ್ಲಿ ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದರು. (ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಅವರು 2004ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ 2005 ರ ಉಪಚುನಾವಣೆಯಲ್ಲೂ ಸೋಲು ಕಾಣುತ್ತಾರೆ.)
ನಂತರ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರಿದ ಆಯನೂರು ಮಂಜುನಾಥ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. 2009ರಲ್ಲಿ ಬಿ.ವೈ. ರಾಘವೇಂದ್ರ ಗೆಲುವಿಗೆ ಶ್ರಮಿಸಿದ್ದರು. 2010ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
2018ರಲ್ಲಿ ಡಿ.ಹೆಚ್.ಶಂಕರಮೂರ್ತಿ ಅವರ ರಾಜಕೀಯ ನಿವೃತ್ತಿಯಿಂದಾಗಿ ನೈಋತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಎಂಎಲ್‍ಸಿ ಸ್ಥಾನದ ಅವಧಿ ಇನ್ನೂ 14 ತಿಂಗಳು ಬಾಕಿ ಇರುವಾಗಲೇ ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಬಿಎ, ಎಲ್.ಎಲ್.ಬಿ. ಪದವೀಧರರಾಗಿರುವ ಇವರು ಉತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದಾರೆ. ವಿಧಾನಮಂಡಲದ ಎರಡೂ ಸದನ ಹಾಗೂ ಪಾರ್ಲಿಮೆಂಟ್‍ನ ಎರಡೂ ಸದನಗಳ ಸದಸ್ಯರಾದ ಹೆಗ್ಗಳಿಕೆಗೆ ಪಾತ್ರರಾದವರು. (ರಾಜ್ಯದಲ್ಲಿ ನಾಲ್ಕೂ ಸದನಗಳ ಸದಸ್ಯರಾದ ಹೆಗ್ಗಳಿಕೆ ಎಸ್.ಎಂ.ಕೃಷ್ಣ, ಬಿ.ಎಲ್. ಶಂಕರ್ ಹಾಗೂ ಆಯನೂರು ಮಂಜುನಾಥ್ ಅವರಿಗಿದೆ).
ನೇರ-ನಿಷ್ಠೂರವಾಗಿ ಮಾತನಾಡುವ ಇವರು, ಸದನದಲ್ಲಿ ಸ್ವ ಪಕ್ಷದ ಸರ್ಕಾರದ ವಿರುದ್ಧವೇ ಸದನದಲ್ಲಿ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಹತ್ತಾರು ವರ್ಷಗಳಿಂದ ಜ್ವಲಂತ ಸಮಸ್ಯೆಯಂತಿದ್ದ ಎನ್.ಪಿ.ಎಸ್. ನೌಕರರ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ನ ಕಟ್ಟಾಳು ಹೆಚ್.ಸಿ. ಯೋಗೀಶ್:
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹೆಚ್.ಸಿ. ಯೋಗೀಶ್ ನಗರಸಭೆ ಸದಸ್ಯರಾಗಿ, ಮಹಾನಗರ ಪಾಲಿಕೆ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಆಡಳಿತ ಪಕ್ಷದ ನಾಯಕರಾಗಿ, ವಿಪಕ್ಷ ನಾಯಕರಾಗಿ ಅನುಭವ ಹೊಂದಿದವರು. ಹಾಲಿ ಪಾಲಿಕೆ ಸದಸ್ಯರು.

ಹೆಚ್.ಸಿ. ಯೋಗೀಶ್ ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬ. ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತರು. 1978ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ತರೀಕೆರೆಯ ಶಾಸಕರಾಗಿದ್ದ ಹೆಚ್.ಎಂ. ಮಲ್ಲಿಕಾರ್ಜುನಪ್ಪ ಅಜ್ಜ. ಶಿವಮೊಗ್ಗ ಕ್ಷೇತ್ರದಲ್ಲಿ 1999ರ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಎದುರು ಗೆಲುವು ಸಾಧಿಸಿದ್ದ ಹೆಚ್.ಎಂ. ಚಂದ್ರಶೇಖರಪ್ಪ ಅವರ ತಂದೆ. ಸದ್ಯ ಮಾಜಿ ಶಾಸಕರ ಸಂಘದ ಅಧ್ಯಕ್ಷರಾಗಿದ್ದಾರೆ.
ಹೆಚ್.ಸಿ. ಯೋಗೀಶ್ ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದ ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಗಳನ್ನು, ವೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.
ಬಡವರ ಬಂಧು ಎಎಪಿಯ ಟಿ. ನೇತ್ರಾವತಿ:
ಎಎಪಿ ಅಭ್ಯರ್ಥಿ ಟಿ. ನೇತ್ರಾವತಿ ಎಂಎಸ್‍ಸಿ ಹಾಗೂ ಎಂಬಿಎ ಪದವೀಧರರಾಗಿದ್ದು, ರೋಟರಿ, ಜೆಸಿಐ ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮುಖ್ಯವಾಗಿ ಪ್ಯಾರಾ ಮೆಡಿಕಲ್ ಕಾಲೇಜೊಂದನ್ನು ನಡೆಸುತ್ತಿದ್ದು, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಪ್‍ನ ಕೇಜ್ರಿವಾಲ್ ಅವರ ಜನಪ್ರಿಯತೆ, ದೆಹಲಿ ಸರ್ಕಾರದ ಸಾಧನೆಗಳನ್ನು ಗಮನಿಸಿ ಆಪ್‍ನಲ್ಲಿ ತೊಡಗಿಕೊಂಡ ಟಿ. ನೇತ್ರಾವತಿ ಅವರು ಕಳೆದೊಂದು ವರ್ಷದಿಂದ ನಿರಂತರವಾಗಿ ಜನಸಂಪರ್ಕದಲ್ಲಿದ್ದಾರೆ. ವಿದೇಶಿ ಅಡಿಕೆ ಆಮದು ವಿರೋಧಿಸಿ 2 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ವಿಐಎಸ್‍ಎಲ್ ಉಳಿವಿಗೆ 20 ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆದಿದ್ದರು.

ಚುನಾವಣೆಗೆ ಮೂರ್ನಾಲ್ಕು ತಿಂಗಳು ಮೊದಲೇ ಅಭ್ಯರ್ಥಿಯಾಗುವುದು ಖಾತ್ರಿಯಾಗಿದ್ದರಿಂದ ಈಗಾಗಲೇ ಒಂದು ಸುತ್ತು ಕ್ಷೇತ್ರದಾದ್ಯಂತ ಓಡಾಡಿದ್ದಾರೆ. ದೆಹಲಿ ಸರ್ಕಾರದ ಸಾಧನೆಯನ್ನೇ ಮುಂದಿಟ್ಟುಕೊಂಡು ಮತಗಳ ಕ್ರೋಢೀಕರಣದ ಲೆಕ್ಕಾಚಾರದಲ್ಲಿದ್ದಾರೆ.
ಮೂವರು ಅಭ್ಯರ್ಥಿಗಳು ಲಿಂಗಾಯತರು:
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದು, ಮೂರೂ ಪ್ರಮುಖ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಒಟ್ಟಾರೆ ಈ ಬಾರಿಯ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣೆ ಹೈವೋಲ್ಟೇಜ್ ಕಣವಾಗಿ ಪರಿಣಮಿಸಿದ್ದು, ಒಂದೇ ಕೋಮಿಗೆ ಸೇರಿದ ಮೂವರು ಅಭ್ಯರ್ಥಿಗಳ ವಿರುದ್ಧ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಲ್ಲ ಅಭ್ಯರ್ಥಿಗಳು ಮತಭೇಟೆಗೆ ತಮ್ಮದೇ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಮತದಾರರನ್ನು ಸೆಳೆಯುವಲ್ಲಿ ಯಾರ್ಯಾರು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತಾರೆ ಎನ್ನುವುದು ಮತದಾನದ ಬಳಿಕವೇ ಗೊತ್ತಾಗಲಿದೆ.
ಅಯನೂರು ಮಂಜುನಾಥ್‍ಗೆ ಮಾತು-ಅನುಭವದ ಬಂಡವಾಳವಿದ್ದರೆ, ಚೆನ್ನಬಸಪ್ಪ ಅವರಿಗೆ ಪಕ್ಷನಿಷ್ಠೆ-ಕಾರ್ಯಕರ್ತರ ಬಲವಿದೆ. ಯೋಗೀಶ್‍ಗೆ ಈ ಬಾರಿ ರಾಜ್ಯದಲ್ಲಿರುವ ಸಿದ್ದರಾಮಯ್ಯ-ಕಾಂಗ್ರೆಸ್‍ನ ಅಲೆ, ಕಾರ್ಯಕರ್ತರ ಪಡೆ ಬೆಂಬಲಕ್ಕಿದೆ. ಟಿ. ನೇತ್ರಾವತಿ ಅವರಿಗೆ ದೆಹಲಿ ಸರ್ಕಾರದ ಸಾಧನೆಗಳು, ಕಾಂಗ್ರೆಸ್-ಬಿಜೆಪಿ-ಜೆಡಿಎಸ್‍ನ ವೈಫಲ್ಯಗಳು ಆಸರೆಯಾಗಬಹುದೆಂಬ ನಿರೀಕ್ಷೆಯಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles