Wednesday, September 25, 2024
spot_img

ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್‍ಗೆ ಶಿವಮೊಗ್ಗ ಟಿಕೆಟ್!?

ಶಿವಮೊಗ್ಗ: ಇನ್ನೇನು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೆರಡು ದಿನಗಳು ಬಾಕಿ ಇದ್ದರೂ ಶಿವಮೊಗ್ಗ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದೇ ಇರುವುದು ಕ್ಷೇತ್ರದಲ್ಲಿ ಆಕಾಂಕ್ಷಿಗಳಲ್ಲಿ ಟೆನ್ಷನ್ ಹೆಚ್ಚಾಗುತ್ತಿದೆ. ಇದರ ನಡುವೆಯೇ ಕೆ.ಈ. ಕಾಂತೇಶ್ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೆ.ಎಸ್.ಈಶ್ವರಪ್ಪ ಚುನಾವಣೆ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರಿಂದ ಅವರ ಬದಲಿಗೆ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಉಂಟಾಗಿತ್ತು. ಈ ಮಧ್ಯೆ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್‍ಗಾದರೂ ಟಿಕೆಟ್ ನೀಡಬೇಕೆಂದು ವಿವಿಧ ಸಮಾಜಗಳ ಮುಖಂಡರು ಆಗ್ರಹಿಸಿದ್ದರು.
ಇಷ್ಟಾದರೂ ಬಿಜೆಪಿ 222 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದರೂ ಶಿವಮೊಗ್ಗ ಮತ್ತು ಮಾನ್ವಿ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡದೇ ಇರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಮಧ್ಯೆ ನಿನ್ನೆ ಬಿಜೆಪಿ ಘೋಷಿಸಿದ ಮೂರನೇ ಪಟ್ಟಿಯಲ್ಲಿ ಕೇವಲ 10 ಮಂದಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಹದೇವಪುರ ಕ್ಷೇತ್ರದಲ್ಲಿ, ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಲಿಂಬಾವಳಿ, ಹೆಬ್ಬಾಳದಲ್ಲಿ ಕಟ್ಟಾಸುಬ್ರಹ್ಮಣ್ಯ ನಾಯ್ಡು ಬದಲಿಗೆ ಅವರ ಪುತ್ರ ಕಟ್ಟಾ ಜಗದೀಶ್ ಅವರ ಹೆಸರು ಘೋಷಣೆ ಮಾಡಲಾಗಿದೆ.
ಇದರಿಂದಾಗಿ ಕೆ.ಎಸ್.ಈಶ್ವರಪ್ಪ ಅಥವಾ ಕೆ.ಈ. ಕಾಂತೇಶ್ ಅವರಲ್ಲಿಯೇ ಒಬ್ಬರು ಅಭ್ಯರ್ಥಿಯಾಗುವುದು ಪಕ್ಕಾ ಎನ್ನಲಾಗುತ್ತಿದೆ.

ಧಾರವಾಡ-ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಮಹೇಶ್ ಟೆಂಗಿನಕಾಯಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಲೇ ರೆಬೆಲ್ ಆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿ ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ವರಿಷ್ಟರು ಇದೇ ರೀತಿ ಚುನಾವಣಾ ರಾಜಕಾರಣದಿಂದ ನಿವೃತ್ತಿ ನೀಡುತ್ತಿರುವ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಬದಲಿಗೆ ಅವರ ಪುತ್ರನಿಗೆ ಕಟ್ಟಾ ಜಗದೀಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದೇ ಮಾನದಂಡವನ್ನು ಶಿವಮೊಗ್ಗದಲ್ಲೂ ಅನುಸರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಆಯನೂರು ಅಸ್ತ್ರಕ್ಕೆ ಪ್ರತ್ಯಸ್ತ್ರ:
ಈ ಬಾರಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈ ಬಾರಿ ಈಶ್ವರಪ್ಪ ಅಥವಾ ಅವರ ಪುತ್ರನಿಗೆ ಟಿಕೆಟ್ ನೀಡಬಾರದೆಂದು ಆಯನೂರು ಮಂಜುನಾಥ್ ಆಗ್ರಹಿಸಿದ್ದರು. ಈಶ್ವರಪ್ಪ ಅಥವಾ ಕಾಂತೇಶ್‍ಗೆ ಟಿಕೆಟ್ ನೀಡಿದಲ್ಲಿ ಅವರ ವಿರುದ್ಧ ನಾನೇ ಸ್ಪರ್ಧಿಸುವುದಾಗಿ ತಿಳಿಸಿದ್ದರು.

ಯುಗಾದಿಯ ಶುಭಾಶಯದ ಫ್ಲೆಕ್ಸ್‍ಗಳಲ್ಲಿ ‘ಹರಕುಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ-ಸೌಹಾರ್ಧತೆ ನೆಲೆಸಲಿ’ ಎಂಬ ಘೋಷಣೆಯೊಂದಿಗೆ ಶುಭಾಶಯಗಳನ್ನು ಕೋರುವ ಫ್ಲೆಕ್ಸ್‍ಗಳನ್ನು ಹಾಕಿಸಿದ್ದರು. ಮೊದಲಿಗೆ ನನ್ನ ಬೆಂಬಲಿಗರು ಹಾಕಿದ್ದು ಎಂದು ಹೇಳಿದ್ದ ಅವರು ನಂತರದ ದಿನಗಳಲ್ಲಿ ಫ್ಲೆಕ್ಸ್‍ಗಳಲ್ಲಿ ಹಾಕಿದ್ದ ಘೋಷಣೆಗಳನ್ನೇ ಈಶ್ವರಪ್ಪ ಅವರ ಮೇಲೆ ಆರೋಪಿಸಿದ್ದರು.
ನಂತರ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ, ಖಾಸಗಿ ಕಚೇರಿಯನ್ನೂ ತೆರೆದಿದ್ದರು. ಒಂದೆಡೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳುತ್ತಾ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡದೇ ಈಶ್ವರಪ್ಪ ಅಥವಾ ಕಾಂತೇಶ್‍ಗೆ ಟಿಕೆಟ್ ನೀಡಿದರೆ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದ ಅವರು ‘ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ’ ಎಂಬ ಮಾತುಗಳನ್ನೂ ಆಡಿ ಅಡಕತ್ತರಿಯಲ್ಲಿ ಸಿಲುಕಿದ್ದರು.
ಬಿಜೆಪಿ ನಾಯಕರಿಗೆ ಆಯನೂರು ಮಂಜುನಾಥ್ ನಡೆ ಒಂದು ರೀತಿ ಮುಜುಗರ ಉಂಟು ಮಾಡಿತ್ತು. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು, ವಿವಿಧ ಸಮಾಜಗಳ ಮುಖಂಡರು, ಮುಖ್ಯವಾಗಿ ಶಿವಮೊಗ್ಗ ಪಾಲಿಕೆ ಸದಸ್ಯರು ಈಶ್ವರಪ್ಪನವರಿಗೇ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು.

ಕಾಂಗ್ರೆಸ್ ಸಹ ಶಿವಮೊಗ್ಗದಲ್ಲಿ ಕಾದು ನೋಡುವ ತಂತ್ರ ಅನುಸರಿಸಿತ್ತು. ಈಶ್ವರಪ್ಪ ಅಥವ ಕಾಂತೇಶ್‍ಗೆ ಟಿಕೆಟ್ ನೀಡಿದಲ್ಲಿ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಅದ್ಯಾವಾಗ ಆಯನೂರು ಮಂಜುನಾಥ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟರೋ ಬಿಜೆಪಿ ನಾಯಕರು ಫುಲ್ ಅಲರ್ಟ್ ಆಗಿದ್ದರು. ಶಿವಮೊಗ್ಗ ಕ್ಷೇತ್ರವನ್ನು ಶತಾಯಗತಾಯ ಬಿಜೆಪಿ ತೆಕ್ಕೆಯಿಂದ ಹೋಗದಂತೆ ನೋಡಿಕೊಳ್ಳಲು ತಂತ್ರಗಾರಿಕೆ ಹೆಣೆದರು.
ಈಶ್ವರಪ್ಪ ವಿರುದ್ಧ ತೊಡೆತಟ್ಟಿದ್ದ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್‍ಗೆ ಹೋಗದಂತೆ ತಡೆಯಲು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದ ಎಸ್.ಎಸ್. ಜ್ಯೋತಿಪ್ರಕಾಶ್ ಅವರ ಹೆಸರನ್ನು ಮೊದಲಿಗೆ ತೇಲಿಬಿಡಲಾಯ್ತು. ಈ ಮಧ್ಯೆ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಪುತ್ರ ಹರಿಕೃಷ್ಣ, ಡಾ. ಧನಂಜಯ ಸರ್ಜಿ ಅವರ ಹೆಸರುಗಳೂ ಚರ್ಚೆಯಾಗುತ್ತಿತ್ತು.

ಈಶ್ವರಪ್ಪ ಮಾತ್ರ ತಟಸ್ಥ ನೀತಿ ಅನುಸರಿಸಿದ್ದಲ್ಲದೇ ಕಾಂತೇಶ್ ಮೂಲಕವೂ ‘ಪಕ್ಷದ ವರಿಷ್ಟರಿಗೆ ಟಿಕೆಟ್ ನೀಡುವಂತೆ ನಾನು ಕೇಳಿಲ್ಲ’ ಎಂಬ ಮಾತನ್ನು ಹೇಳಿಸಿದರು. ಇದರಿಂದ ಕಾಂಗ್ರೆಸ್‍ನಲ್ಲೂ ಈಶ್ವರಪ್ಪ ಅಥವಾ ಕಾಂತೇಶ್ ಅಭ್ಯರ್ಥಿಯಾಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಹಾಗಾಗಿ ಪ್ರಬಲ ಲಿಂಗಾಯತ ಕೋಮಿನ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪುತ್ರ ಹಾಗೂ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಅವರನ್ನು ಕಣಕ್ಕಿಳಿಸಿತು. ಅಷ್ಟಾದರೂ ಬಿಜೆಪಿಯಲ್ಲಿ ಗೊಂದಲ ಮುಂದುವರೆದಿತ್ತು. ಟಿಕೆಟ್ ರೇಸ್‍ನಲ್ಲೇ ಇಲ್ಲದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರ ಹೆಸರನ್ನು ಭಾನುವಾರ ತೇಲಿಬಿಡಲಾಯ್ತು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಚೆನ್ನಿ ಅವರ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆ ಸೋಮವಾರ ಈಶ್ವರಪ್ಪ ಅಭಿಮಾನಿಗಳಲ್ಲಿ ಉತ್ಸಾಹ ಕುಗ್ಗಿತ್ತು.
ಆದರೆ, ನಿನ್ನೆ ಬಿಜೆಪಿ ಮೂರನೇ ಪಟ್ಟಿ ಪ್ರಕಟಿಸಿ ಅಲ್ಲಿಯೂ ಎರಡು ಕ್ಷೇತ್ರಗಳ ಹೆಸರು ಬಾಕಿ ಉಳಿಸಿದ್ದರಿಂದ ಮತ್ತಷ್ಟು ಕುತೂಹಲಕ್ಕೆಡೆಮಾಡಿತ್ತು. ಶಿವಮೊಗ್ಗ ಕ್ಷೇತ್ರದ ಹೆಸರು ಮೂರನೇ ಪಟ್ಟಿಯಲ್ಲಿರಲಿಲ್ಲ.
ಈಶ್ವರಪ್ಪ ಬೆಂಬಲಕ್ಕೆ ಆರ್‍ಎಸ್‍ಎಸ್?!
ಕೆ.ಎಸ್. ಈಶ್ವರಪ್ಪ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಯಾವತ್ತೂ ತಿರಸ್ಕರಿಸಿಲ್ಲ. 1999ರಲ್ಲಿ ಸೋತಾಗ ಪಕ್ಷದ ಮುಂದೆ ಯಾವುದೇ ಬೇಡಿಕೆ ಇಡಲಿಲ್ಲ. ಪಕ್ಷವೇ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು. 2001ರಲ್ಲಿ ಕನಕಪುರ ಸಂಸದ ಸ್ಥಾನಕ್ಕೆ ದೇವೇಗೌಡರೆದುರು ಬಿಜೆಪಿಯಿಂದ ಯಾರೂ ಸ್ಪರ್ಧಿಸಲು ಸಿದ್ಧರಿರಲಿಲ್ಲ. ಅಲ್ಲಿನ ಪ್ರಭಾವಿ ನಾಯಕರಾಗಿದ್ದ ಆರ್. ಅಶೋಕ್ ಸಹ ಹಿಂದೇಟು ಹಾಕಿದ್ದರು. ಯಾಕಂದ್ರೆ ದೇವೇಗೌಡರ ಗೆಲುವು ನಿಶ್ಚಿತವಾಗಿತ್ತು. ಆದರೆ, ಈಶ್ವರಪ್ಪ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿ, 2 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿದ್ದರು. ನಂತರ ಮತ್ತೆ ಪಕ್ಷ ಅವರಿಗೆ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿತ್ತು. 2013ರಲ್ಲಿ ಸೋಲು ಕಂಡಾಗಲೂ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದರು.

ಬಿಜೆಪಿಯಲ್ಲಿ ಎಷ್ಟು ಸಕ್ರಿಯರಾಗಿದ್ದರೋ ಆರ್.ಎಸ್.ಎಸ್.ನಲ್ಲೂ ಈಶ್ವರಪ್ಪ ಸಕ್ರಿಯವಾಗಿದ್ದರು. ಜೊತೆಗೆ ರಾಜ್ಯದಲ್ಲಿ ಹಿಂದುತ್ವದ ಬಗ್ಗೆ ಹಿಂದೂಮುಂದೂ ನೋಡದೇ ಮಾತನಾಡುವ ಏಕೈಕ ನಾಯಕ ಎಂದರೆ ಅದು ಈಶ್ವರಪ್ಪ ಮಾತ್ರ. ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಪುಂಡಾಟಿಕೆ ಮೆರೆದಾಗ ಅದನ್ನು ನಿರ್ಧಾಕ್ಷೀಣ್ಯವಾಗಿ ಖಂಡಿಸಿದ್ದು ಈಶ್ವರಪ್ಪ ಮಾತ್ರ. ಹಾಗಾಗಿ ಈ ಬಾರಿಯೂ ಈಶ್ವರಪ್ಪ ಬೆನ್ನಿಗೆ ಆರ್.ಎಸ್.ಎಸ್. ನಿಂತಿದೆ.
ಒಂದು ಮೂಲಗಳ ಪ್ರಕಾರ ಕಳೆದೆರಡು ಕಳೆದೆರಡು ತಿಂಗಳ ಹಿಂದೆಯೇ ಆರ್.ಎಸ್.ಎಸ್. ನಾಯಕರ ನಿಯೋಗವೊಂದು ದೆಹಲಿಗೆ ಹೋಗಿ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿತ್ತು ಎನ್ನಲಾಗುತ್ತಿದೆ.
ಪಕ್ಷದಲ್ಲಿ ಈಶ್ವರಪ್ಪ ವಿರೋಧಿ ಬಣವನ್ನು ಕಟ್ಟಿಹಾಕಲು ಟಿಕೆಟ್ ಘೋಷಣೆ ತಡವಾಗುತ್ತಿದೆ. ಕೆ.ಎಸ್.ಈಶ್ವರಪ್ಪ ಅವರನ್ನೇ ಕಣಕ್ಕಿಳಿಸಬೇಕು ಎನ್ನುವ ಒತ್ತಡವಿದೆ. ಆದರೆ, ಪಕ್ಷದ ವಯೋ ನಿವೃತ್ತಿಯ ನಿಯಮವನ್ನು ಅನುಸರಿಸಬೇಕು. ಹಾಗೇಯೇ ಈಶ್ವರಪ್ಪ ಅವರನ್ನು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕೆ.ಈ. ಕಾಂತೇಶ್ ಅವರನ್ನು ಕೊನೆ ಕ್ಷಣದಲ್ಲಿ ಕಣಕ್ಕಿಳಿಸಬಹುದು.
ಒಟ್ಟಾರೆ ಶೀಘ್ರದಲ್ಲೇ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಯ ಗೊಂದಲಕ್ಕೆ ತೆರೆ ಬೀಳಲಿದ್ದು, ಕೆ.ಈ. ಕಾಂತೇಶ್ ಅಭ್ಯರ್ಥಿಯಾಗುವುದು ನಿಚ್ಚಳವಾಗುತ್ತಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles