Wednesday, September 25, 2024
spot_img

ಬಿಜೆಪಿಯಿಂದ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಡಿ.ಎಸ್.ಅರುಣ್

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಡಬಲ್ ಇಂಜಿನ್ ಸರ್ಕಾರದ ವಿಶೇಷ ಯೋಜನೆಗಳಿಂದ ರಾಜ್ಯದ ಎಲ್ಲ ಗ್ರಾಮಗಳ ಸಬಲೀಕರಣ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಆರ್ಥಿಕವಾಗಿ ಬಲಿಷ್ಠವಾಗಿದ್ದು, ಮೋದಿ ಅವರು ಗ್ರಾಮಗಳ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದೆ ಎಂದು ತಿಳಿಸಿದರು.
ಪಂಚಾಯಿತಿ ವ್ಯವಸ್ಥೆ ಸದೃಢಗೊಳಿಸುವಲ್ಲಿ ಬಿಜೆಪಿ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮ ಸದಸ್ಯರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗಿದೆ. ಗ್ರಾಮ ಮಟ್ಟದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಗ್ರಾಮದ ಮನೆ ಮನೆಗಳಿಗೂ ತಲುಪಿಸುವ ಕೆಲಸ ಆಗಬೇಕು ಎಂದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಮಾತನಾಡಿ, ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪರಿಣಾಮ ಬಿಜೆಪಿಗೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದೆ. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಏ. 18ರ ಮಂಗಳವಾರ ನಾಮಪತ್ರ ಸಲ್ಲಿಸುತ್ತಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಿದ್ದು, ಕೋಟ್ಯಾಂತರ ರೂ.ಗಳ ಅನುದಾನದಲ್ಲಿ ಯೋಜನೆಗಳ ಅನುಷ್ಠಾನ ಮಾಡಿದೆ. ವಿಮಾನ ನಿಲ್ದಾಣ, ರಸ್ತೆ, ರೈಲ್ವೇ ಸಾರಿಗೆ ಸಂಪರ್ಕ ವ್ಯವಸ್ಥೆ ಸದೃಢಗೊಳಿಸಿದೆ ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ರತ್ನಾಕರ ಶೆಣೈ ಮಾತನಾಡಿ, ಕೆ.ಬಿ.ಅಶೋಕ ನಾಯ್ಕ ಅವರು ಶಾಸಕರಾಗಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿಯೊಂದು ಗ್ರಾಮದ ಮನೆ ಮನೆಗಳಿಗೂ ತಲುಪಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಮತ್ತೊಮ್ಮೆ ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮಹಾಶಕ್ತಿ ಕೇಂದ್ರಗಳ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ಕುಂಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಲೇಶಂಕರ ಗ್ರಾಮದ ಶ್ರೀ ಮಲೇಶಂಕರ ಸ್ವಾಮಿಯ ರಥೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಪಾಲ್ಗೊಂಡು ದೇವರ ದರ್ಶನ ಪಡೆದರು. ಆನವೇರಿ ಗ್ರಾಮದಲ್ಲಿ ಪಕ್ಷದ ಮುಖಂಡರ ಮನೆಗಳಿಗೆ ಭೇಟಿ ನೀಡಿದರು.

 


ಭಾನುವಾರ ಬೆಳಗ್ಗೆಯಿಂದಲೇ ಗ್ರಾಮಾಂತರ ಪ್ರದೇಶದ ವಿವಿಧ ಭಾಗಗಳಲ್ಲಿ ಇರುವ ದೇವಸ್ಥಾನಗಳಿಗೆ ಗ್ರಾಮಾಂತರ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಭೇಟಿ ನೀಡಿದರು. ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಊರಗಡೂರು ಶಿವದುರ್ಗ ಶ್ರೀ ವಿನಾಯಕ ಸ್ವಾಮಿ, ನಿದಿಗೆ ಶ್ರೀ ಶನೈಶ್ಚರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಮಂಡಲ ಅಧ್ಯಕ್ಷ ಮಂಜುನಾಥ್ ಕಲ್ಲಜ್ಜನಾಳ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಗೋಪಾಲ್, ಗಿರೀಶ್, ಹೊಳೆಹೊನ್ನೂರು ಮಂಡಲ ಪ್ರಧಾನ ಕಾರ್ಯದರ್ಶಿ ಉಜ್ಜಿನಪ್ಪ, ಮಲ್ಲೇಶ್, ಷಡಾಕ್ಷರಪ್ಪ ಗೌಡ, ಜಗದೀಶ್ ಗೌಡ, ಮಂಜಣ್ಣ, ವಿರೇಶ್, ಶಿವಣ್ಣ, ದಾನಶೇಖರಪ್ಪ, ಹಾಲೇಶ್, ಚನ್ನಬಸಪ್ಪ, ರಂಗೋಜಿ ರಾವ್, ಸುರೇಶ್, ರುದ್ರೋಜಿರಾವ್, ರಮೇಶ್ ಭೈರನಕೊಪ್ಪ ಮತ್ತಿತರರು ಉಪಸ್ಥಿತರಿದ್ದರು

Related Articles

Stay Connected

0FansLike
3,912FollowersFollow
0SubscribersSubscribe

Latest Articles