ವಾಲ್ಮೀಕಿ’ ಆಯ್ತು ಈಗ ‘ಪ್ರವಾಸೋದ್ಯಮ ಇಲಾಖೆ’ಯಲ್ಲಿ ಕೋಟ್ಯಂತರ ರೂ ಹಣ ಅಕ್ರಮ ವರ್ಗಾವಣೆ!?

0
135

‘ವಾಲ್ಮೀಕಿ’ ಆಯ್ತು ಈಗ ‘ಪ್ರವಾಸೋದ್ಯಮ ಇಲಾಖೆ’ಯಲ್ಲಿ ಕೋಟ್ಯಂತರ ರೂ ಹಣ ಅಕ್ರಮ ವರ್ಗಾವಣೆ!

ಬಾಗಲಕೋಟೆ : ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದ್ದು, ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹೆಸರಿನಲ್ಲಿದ್ದ ಮೂರು ಅಕೌಂಟ್‌ಗಳಿಂದ ಹಣ ವರ್ಗಾಯಿಸಲಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಗಳು ಅಕೌಂಟ್‌ಗಳ ಬಗ್ಗೆ ಮಾಹಿತಿ ಕೊಡಿ ಎಂದು ಆದೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಹೌದು ವಾಲ್ಮೀಕಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಒಂದು ಹಗರಣದ ತನಿಖೆ ನಡೆಯುತ್ತಿರುವಾಗಲೇ ಇದೀಗ ಮತ್ತೊಂದು ಹಗರಣ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸಿದೆ.

ಬಾಗಲಕೋಟೆ ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ 3 ಖಾತೆಗಳ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಹಗರಣದಲ್ಲಿ 2,47,00,773 ರೂಪಾಯಿ ಮಾಯವಾಗಿದ್ದು, ಬ್ಯಾಂಕ್‌ ಅಧಿಕಾರಿ, ಸಿಬ್ಬಂದಿ ಹಗರಣದಲ್ಲಿ ಶಾಮೀಲಾಗಿರುವ ಶಂಕೆ ಇದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಲಾಖೆಯ ಖಾತೆಗಳ ಪೈಕಿ ಬೇರೆ ಬೇರೆ ಅವಧಿಯಲ್ಲಿ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ. ಒಂದು ಖಾತೆಯಲ್ಲಿ ಅ.21, 2021 ರಿಂದ ಫೆ.2024ರವರೆಗೆ 1,35,96,500 ರೂ. ಟ್ರಾನ್ಸಫರ್‌ ಮಾಡಲಾಗಿದೆ. ಮತ್ತೊಂದು ಖಾತೆಯಲ್ಲಿ ಮೇ 4, 2022ರಿಂದ ನ.7, 2022ರವರೆಗೆ 1,01,33,750 ರೂ. ವರ್ಗಾವಣೆಯಾಗಿದೆ. ಮೂರನೇ ಖಾತೆಯಲ್ಲಿ ಅ.11, 2022 ರಂದು 10,43,749 ರೂ. ವರ್ಗಾಯಿಸಲಾಗಿದೆ. ಒಂದು ಖಾತೆಯಲ್ಲಿ 28 ಸಲ, ಮತ್ತೊಂದು ಖಾತೆಯಲ್ಲಿ 25 ಬಾರಿ, ಇನ್ನೊಂದು ಖಾತೆಯಲ್ಲಿ ಒಂದು ಬಾರಿ ಹಣ ವರ್ಗಾವಣೆಗೊಂಡಿರುವುದು ಪತ್ತೆಯಾಗಿದೆ.

ಸಮಿತಿ ಹೆಸರಿನ ಖಾತೆಗಳಲ್ಲಿ ಎರಡೂವರೆ ಕೋಟಿ ರೂ. ಬದಲು ಕೇವಲ 2, 925 ರೂ. ಮಾತ್ರ ಇರುವುದು ಗಮನಿಸಿ ಅಧಿಕಾರಿಗಳು ಹೌಹಾರಿದ್ದಾರೆ. ತಕ್ಷಣ ಉಪನಿರ್ದೇಶಕ ಗೋಪಾಲ ಹಿತ್ತಲಮನಿ ಅವರು ಸಿಇಎನ್‌ ಠಾಣೆಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಂಚನೆ, ಅವ್ಯವಹಾರ ಸೇರಿದಂತೆ ನಾನಾ ಕಲಂಗಳಡಿ ದೂರು ದಾಖಲಾಗಿದೆ.