ನಕಲಿ ಜಾತಿ ಪ್ರಮಾಣ ಪತ್ರ ಐವರ ವಿರುದ್ಧ ದೂರು ಧಾಖಲು

0
56

ತುಮಕೂರು: ಸುಳ್ಳು ದಾಖಲೆ ಸಲ್ಲಿಸಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದ ಎಂಜಿನಿಯರ್, ಪ್ರಮಾಣಪತ್ರ ಮಾಡಿಕೊಟ್ಟಿದ್ದ ನಿವೃತ್ತ ತಹಸೀಲ್ದಾ‌ರ್ ಸೇರಿದಂತೆ ನಾಲ್ವರ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ ಸಹಾಯಕ ಎಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಎಂ.ತಾರಾ ವಿರುದ್ಧ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತುಮಕೂರು ಘಟಕದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪಿ.ಎನ್‌. ಮಂಜುಳಾ, ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ತುಮಕೂರಿನ ವಿನೋಬ ನಗರದ ನಿವಾಸಿ ತಾರಾ ಅವರು ಗೌಂಡರ್ ಜಾತಿಗೆ ಸೇರಿದವರಾಗಿದ್ದಾರೆ. ಪರಿಶಿಷ್ಟ ಜಾತಿಯ ಸವಲತ್ತು ಪಡೆಯುವ ಉದ್ದೇಶದಿಂದ ಸುಳ್ಳು ದಾಖಲೆ ಸಲ್ಲಿಸಿ 2010ರ ಆ.13ರಂದು ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಂಜುನಾಥ್‌ ಎಂಬುವರು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದ್ದರು. ಈ ಸಂಬಂಧ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಯಿಂದ ತನಿಖೆ ನಡೆದಿತ್ತು. ತನಿಖೆಯ ಸಮಯದಲ್ಲಿ ತಾರಾ ಸುಳ್ಳು ಪ್ರಮಾಣ ಪತ್ರ ಪಡೆದಿರುವುದು ದೃಢಪಟ್ಟಿದೆ ಎಂದು ಪಿ.ಎನ್.ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ.

 

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ಕೇಸ್: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ ಸಹಾಯಕ ಎಂಜಿನಿಯರಾಗಿ ಕೆಲಸ ಮಾಡುತ್ತಿರುವ ಟಿ.ಎಂ.ತಾರಾ, ಪ್ರಮಾಣ ಪತ್ರ ವಿತರಣೆ ಮಾಡಿದ ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟಿದ್ದ ತುಮಕೂರಿನ ನಿವೃತ್ತ ತಹಶೀಲ್ದಾ‌ರ್ ಬಿ. ಅಹೋಬಲಯ್ಯ, ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಜಯಪ್ರಕಾಶ್ ನಾರಾಯಣ್, ನಿವೃತ್ತ ಗ್ರಾಮ ಲೆಕ್ಕಿಗ ಸಿದ್ದಲಿಂಗಪ್ಪ ವಿರುದ್ಧ ಎಸ್‌ಸಿ, ಎಸ್‌ಟಿ, ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.