ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದ ಸೊಸೆ

0
32

ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿರುವ ಘಟನೆ ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ. ಅಲ್ಲದೆ ಸೊಸೆ ರೂಪಾ ಅತ್ತೆ-ಮಾವನನ್ನು ಸರಿಯಾಗಿ ನೋಡಿಕೊಳ್ಳದೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.

ದಾವಣಗೆರೆ, ಏಪ್ರಿಲ್​ 09: ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರ (Arecanut Tree) ಕಡಿದು ಹಾಕಿರುವ ಘಟನೆ ದಾವಣಗೆರೆ (Davangere) ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ. ಚಿದಾನಂದಸ್ವಾಮಿ, ಶಿವನಾಗಮ್ಮ ಅವರ ಜೇಷ್ಠ ಪುತ್ರ ಕುಮಾರಸ್ವಾಮಿಯ ಪತ್ನಿ ರೂಪಾ ಕೆಲ ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. ಆದರೆ ಅತ್ತೆ-ಮಾವ ಆಸ್ತಿಯಲ್ಲಿ ಪಾಲು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೋಪಗೊಂಡ ಸೊಸೆ ರೂಪಾ 3 ವರ್ಷದ 40 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿದ್ದಾಳೆ. “ಸೊಸೆ ರೂಪಾ ನಮ್ಮನ್ನು ಸರಿಯಾಗಿ ನೋಡಿಕೊಳ್ಳದೆ, ಹಲ್ಲೆ ಮಾಡುತ್ತಿದ್ದಾಳೆ. ನಮ್ಮ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕಟ್ಟಿಸಿಕೊಂಡಿದ್ದಾಳೆ. ಎಂದು ಮಾವ ಚಿದಾನಂದಪ್ಪ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ರೂಪಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.