Wednesday, September 25, 2024
spot_img

ಬೆಂಗಳೂರುWater Crisis: ಬೆಂಗಳೂರಿನಲ್ಲಿ ಕುಡಿಯುವ ನೀರಿಂದ ವಾಹನ ತೊಳೆದವರಿಗೆ 20.25 ಲಕ್ಷ ರೂಪಾಯಿ ದಂಡ!

Water Crisis: ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಎಂಟು ವಲಯಗಳಿಂದ 20 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆಯೇ ಅನ್ಯ ಬಳಕೆಗೆ ನೀರು ಬಳಸದಂತೆ ಸೂಚಿಸಲಾಗಿತ್ತು. ವಾಹನಗಳನ್ನು ತೊಳೆಯಲು ಹಾಗೂ ಗಿಡಗಳಿಗೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ತಲಾ 5 ಸಾವಿರದಂತೆ ಬರೋಬ್ಬರಿ 20.25 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ನೀರಿಗೆ ಹಾಹಾಕಾರ (Water Crisis) ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ನೀರಿನ ಪರದಾಟದಿಂದ ಜನರು ಹೈರಾಣಾಗಿದ್ದಾರೆ. ಈ ಸಮಸ್ಯೆಯ ತೀವ್ರತೆಯನ್ನು ಅರಿತ ವಿಸ್ತಾರ ನ್ಯೂಸ್‌ ಸಹ “ಜಲವೇ ಜೀವ”ನ ಅಭಿಯಾನದ ಮೂಲಕ ನೀರಿಲ್ಲದ ಕಡೆಗಳಲ್ಲಿ ಉಚಿತವಾಗಿ ನೀರು ಕೊಡುವ ಅಭಿಯಾನವನ್ನು ಮಾಡುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Bangalore water problem) ಸಲುವಾಗಿ ಕೆಲ ದಿನಗಳ ಹಿಂದೆ ಜಲಮಂಡಳಿ ಆದೇಶವೊಂದನ್ನು ಹೊರಡಿಸಿತ್ತು. ವಾಹನ ತೊಳೆಯಲು ನೀರು ವ್ಯರ್ಥ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಹೇಳಿತ್ತು. ಇದರನ್ವಯ ಈಗ ವಾಹನ ತೊಳೆದವರ ಮೇಲೆ ಇದುವರೆಗೆ ಬರೋಬ್ಬರಿ 20.25 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಈ ಮೂಲಕ ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಎಂಟು ವಲಯಗಳಿಂದ 20 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆಯೇ ಅನ್ಯ ಬಳಕೆಗೆ ನೀರು ಬಳಸದಂತೆ ಸೂಚಿಸಲಾಗಿತ್ತು. ವಾಹನಗಳನ್ನು ತೊಳೆಯಲು ಹಾಗೂ ಗಿಡಗಳಿಗೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ತಲಾ 5 ಸಾವಿರದಂತೆ ಬರೋಬ್ಬರಿ 20 ಲಕ್ಷದ 25 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

 

ಯಾವ್ಯಾವ ವಲಯದಲ್ಲಿ ಎಷ್ಟು ದಂಡ ವಸೂಲಿ?

 

-ಬೆಂಗಳೂರು ಸೆಂಟ್ರಲ್ : 11 ಪ್ರಕರಣ- 55 ಸಾವಿರ ರೂ.

-ಬೆಂಗಳೂರು ಪೂರ್ವ ವಲಯ 1: 22 ಪ್ರಕರಣ- 1 ಲಕ್ಷ 10 ಸಾವಿರ ರೂ.

-ಬೆಂಗಳೂರು ಪೂರ್ವ 2: – 19 ಪ್ರಕರಣ- 95 ಸಾವಿರ ರೂ.

-ಬೆಂಗಳೂರು ಉತ್ತರ 1: 17 ಪ್ರಕರಣ- 85 ಸಾವಿರ ರೂ.

-ಬೆಂಗಳೂರು ಉತ್ತರ 2: 20 ಪ್ರಕರಣ – 1 ಲಕ್ಷ ರೂ.

ಈನ್ನು ಈಶಾನ್ಯ ವಿಭಾಗದಲ್ಲೇ ಅತಿಹೆಚ್ಚು ದಂಡ ಸಂಗ್ರಹವಾಗಿದ್ದು, ಬರೋಬ್ಬರಿ 1 ಲಕ್ಷದ 85 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಬಿಡಬ್ಲ್ಯುಎಸ್‌ಎಸ್‌ಬಿ

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಶುರವಾದ ಹೊತ್ತಿನಲ್ಲಿಯೇ ನೀರಿನ ಸಮರ್ಪಕ ನಿರ್ವಹಣೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (Bangalore Water Supply and Sewerage Board – ಬಿಡಬ್ಲ್ಯುಎಸ್‌ಎಸ್‌ಬಿ) ಮುಂದಾಗಿತ್ತು. ನೀರಿನ ಬಳಕೆ ಹೇಗೆ ಮಾಡಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರ ಅನುಸಾರ ನೀರಿನ ಬಳಕೆ ಮಾಡಬೇಕು. ನಿಷೇಧಿತ ಆರು ಅಂಶಗಳ ಕಾರ್ಯಗಳಿಗೆ ನೀರು ಬಳಕೆ ಮಾಡಿದರೆ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಹೇಳಿತ್ತು. ಅಲ್ಲದೆ, ಇದಕ್ಕೆ ಸಾರ್ವಜನಿಕರ ಸಹಕಾರವನ್ನೂ ಕೋರಿ, ನಿಯಮ ಉಲ್ಲಂಘನೆ ಕಂಡು ಬಂದರೆ 1916 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿತ್ತು.

ನೀರಿನ ದುರ್ಬಳಕೆ ಮಾಡಿದರೆ ಮೊದಲು ಕನಿಷ್ಠ 5,000 ರೂಪಾಯಿ ದಂಡವನ್ನು ವಿಧಿಸಲಾಗುವುದು. ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದರೆ ಕನಿಷ್ಠ ದಂಡ ಶುಲ್ಕದ ಮೇಲೆ 500 ರೂಪಾಯಿ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿತ್ತು. ಇಷ್ಟಾದರೂ ನಿಯಮವನ್ನು ಉಲ್ಲಂಘನೆ ಮಾಡಿದ್ದರಿಂದ ದಂಡ ವಿಧಿಸಲಾಗಿದೆ.

ಬೆಂಗಳೂರು ಜಲ ಮಂಡಳಿಯ ಎಚ್ಚರಿಕೆ ಏನು?

ಈ ಬಗ್ಗೆ ಬೆಂಗಳೂರು ಜಲ ಮಂಡಳಿ ಪ್ರಕಟಣೆಯನ್ನು ಹೊರಡಿಸಿದ್ದು, ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. “ಬೆಂಗಳೂರು ಮಹಾನಗರದಲ್ಲಿ ಕಾಯಂ ನಿವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆ ಇದೆ ಎಂದು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯಕವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತ ಕಂಡಿದೆ. ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

6 ಚಟುವಟಿಕೆಗೆ ನಿರ್ಬಂಧ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈ ಕೆಳಕಂಡ ಚಟುವಟಿಕೆಗೆ ಬಳಸಬಾರದು ಎಂದು ಬೆಂಗಳೂರು ಜಲ ಮಂಡಳಿ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.

ವಾಹನಗಳ ಸ್ವಚ್ಛತೆಗೆ

ಕೈದೋಟಕ್ಕೆ

ಕಟ್ಟಡ ನಿರ್ಮಾಣಕ್ಕೆ

ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ

ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ

ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ

5000 ರೂಪಾಯಿ ದಂಡ

ಬೆಂಗಳೂರು ಜಲಮಂಡಳಿಯ ಈ ನಿಷೇಧ ಆದೇಶ ಉಲ್ಲಂಘಿಸಿ ಮೇಲೆ ಉಲ್ಲೇಖಿಸಿದ ಚಟುವಟಿಕೆಗಳಿಗಾಗಿ ನೀರು ಬಳಸಿದರೆ, ಅಂಥವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5000 ರೂಪಾಯಿ ಜತೆಗೆ ಹೆಚ್ಚುವರಿಯಾಗಿ 500 ರೂಪಾಯಿ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಜಲ ಮಂಡಳಿ ಎಚ್ಚರಿಕೆ ನೀಡಿತ್ತು.

ತಪ್ಪು ಕಂಡರೆ 1916ಕ್ಕೆ ಕರೆ ಮಾಡಿ ದೂರು ಕೊಡಿ

ಈ ಆರು ಚಟುವಟಿಕೆಗೆ ಸಂಬಂಧಪಟ್ಟಂತೆ ಯಾವುದೇ ಸಾರ್ವಜನಿಕರು ನೀರು ಬಳಕೆ ಮಾಡಿದ್ದು ಕಂಡುಬಂದರೆ, ಕೂಡಲೇ ಜಲ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916ಕ್ಕೆ ಕರೆ ಮಾಡಿ ದೂರು ನೀಡಬೇಕು ಎಂದು ಬೆಂಗಳೂರು ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ಹೀಗಾಗಿ ಇಂಥ ಚಟುವಟಿಕೆಯನ್ನು ಕಂಡ ಸಾರ್ವಜನಿಕರು ಸಹ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles