ಬೆಂಗಳೂರು: ಯುಗಾದಿ ಹಬ್ಬಕ್ಕೆಂದು ಬೈಕ್‌ ತೊಳೆಯುತ್ತಿದ್ದ ವ್ಯಕ್ತಿಗೆ 5,000 ರೂ. ದಂಡ ಹಾಕಿದ ಜಲಮಂಡಳಿ

0
14

ಬೆಂಗಳೂರು (ಏ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನತೆಗೆ ಕುಡಿಯಲು ಸರಬರಾಜು ಮಾಡುವ ಕಾವೇರಿ ನೀರನ್ನು ಅನ್ಯಬಳಕೆಗೆ ಉಪಯೋಗ ಮಾಡದಂತೆ ಆದೇಶ

ಹೊರಡಿಸಲಾಗಿದೆ. ಆದರೂ, ನಿಯಮ ಉಲ್ಲಂಘಿಸಿ ಮನೆಯ ಮುಂದೆ ಪೈಪ್‌ನಲ್ಲಿ ನೀರು ಹಿಡಿಯುತ್ತಾ ಬೈಕ್‌ ತೊಳೆಯುತ್ತಿದ್ದ ವ್ಯಕ್ತಿಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಿಬ್ಬಂದಿ 5,000 ರೂ. ದಂಡ ವಿಧಿಸಿದ್ದಾರೆ.

ರಾಜ್ಯದಲ್ಲಿ ಭಾರಿ ಬರಗಾಲ ಆವರಿಸಿದ್ದು, ಬೆಂಗಳೂರು ಸೇರಿದಂತೆ ಎಲ್ಲ ನಗರಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇನ್ನು ಕೆಆರ್‌ಎಸ್‌ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕುಸಿತವಾಗಿರುವುದರಿಂದ ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಮತ್ತು ಗೃಹಬಳಕೆಗೆ ಮಾತ್ರ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. ಜೊತೆಗೆ, ಕಾವೇರಿ ನದಿಯಿಂದ ಪೂರೈಸುವ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದವರಿಗೆ 5,000 ರೂ. ದಂಡ ವಿಧಿಸಲಾಗುತ್ತಿದೆ.

ಆದರೆ, ಯುಗಾದಿ ಹಬ್ಬದ ದಿನ ಗೃಹಬಳಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಪೂರೈಸಲಾದ ನೀರನ್ನ ಅನ್ಯ ಬಳಕೆಗೆ ಬಳಕೆ ಮಾಡಿದವರಿಗೆ ಜಲಮಂಡಳಿ ಸಿಬ್ಬಂದಿ ದಂಡ ಹಾಕಿದ್ದಾರೆ. ಜಲಮಂಡಳಿಯ ಆದೇಶವನ್ನು ಉಲ್ಲಂಘನೆ ಮಾಡಿದ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ. ದಂಡ ಹಾಕಲಾಗಿದೆ. ಜಲಕ್ಷಾಮದ ಮಧ್ಯೆ ಎಚ್ಚರಿಕೆ ವಹಿಸಿದೇ ಕುಡಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ಹಾಕಲಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಂಗಳೂರಿನ ವಿಜ್ಞಾನ ನಗರದಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ದಂಡ ಹಾಕಲಾಗಿದೆ. ಕಳೆದ ಒಂದು ತಿಂಗಳಿಂದ ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವ ಜನರಿಗೆ ಜಲಮಂಡಳಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಇದುವರೆಗೂ ಬರೋಬ್ಬರಿ 365 ಜನರಿಗೆ ದಂಡ ಹಾಕಲಾಗಿದೆ. ಈ ಪೈಕಿ 362 ಜನರಿಂದ ಬರೋಬ್ಬರಿ 19 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.