ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಮಂಡ್ಲಿಯ ಸರ್ಕಾರಿ ಶಾಲೆ ಮಕ್ಕಳು: ಶಿಕ್ಷಣ ಸಚಿವರೇ ಇತ್ತ ಗಮನಿಸಿ

0
593

ಶಿವಮೊಗ್ಗ: ಶಿಕ್ಷಣ ಸಚಿವರ ತವರು ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲೇ ಸರ್ಕಾರಿ ಶಾಲೆಯ ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಮರದ ಕೆಳಗೆ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಹೌದು! ಇಲ್ಲಿನ ಎನ್.ಟಿ.ರಸ್ತೆಯ ನ್ಯೂ ಮಂಡ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಯಾವ ಕುಗ್ರಾಮದ ಸರ್ಕಾರಿ ಶಾಲೆಗಳಿಗಿಂತ ಕಡೆಯಾಗಿದೆ.
ಶಾಲೆಯಲ್ಲಿ ಶಿಕ್ಷಕರಿದ್ದಾರೆ, ಅದಕ್ಕೆ ತಕ್ಕಂತೆ ಮಕ್ಕಳೂ ಇದ್ದಾರೆ. ಆದರೆ, ಮಕ್ಕಳಿಗೆ ಪಾಠ ಮಾಡಲು ಕೊಠಡಿಗಳೇ ಇಲ್ಲ! ಹತ್ತಾರು ವರ್ಷಗಳಿಂದ ಶಿಥಿಲಗೊಂಡ ಕಟ್ಟಡದಲ್ಲೆ ಶಾಲೆ ನಡೆಯುತ್ತಿತ್ತು. 3-4 ವರ್ಷಗಳಿಂದ ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿದ್ದು, ಕಟ್ಟಡ ಕುಸಿಯುವ ಭೀತಿಯಲ್ಲೇ ಶಿಕ್ಷಕರು ಪಾಠ ಮಾಡಬೇಕಿತ್ತು. ಮಕ್ಕಳು ಪಾಠ ಕೇಳಬೇಕಿತ್ತು.

ಹಲವಾರು ಬಾರಿ ಪೋಷಕರು, ಸಾರ್ವಜನಿಕರು ಪ್ರತಿಭಟನೆಎ ನಡೆಸಿದ ಮೇಲೇ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಳೆದೆರಡು ವರ್ಷಗಳಿಂದ ಮಕ್ಕಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಹಳೆಯ ಕಟ್ಟಡ ಕೆಡವಿರುವುದರಿಂದ ಹೆಚ್ಚುವರಿ ಕೊಠಡಿಗಳು ಲಭ್ಯವಾಗದೇ ಮಂಡ್ಲಿಯ ಪಂಪ್‍ಹೌಸ್ ಬಳಿ ಇರುವ ಶ್ರೇ ಗುರು ರೇಣುಕಾರಾಧ್ಯ ಮಠದ ಸಭಾಂಗಣ ಕೊಠಡಿಯಲ್ಲಿ 4ರಿಂದ 5ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಆದರೆ, ಇಲ್ಲಿರುವ ಒಂದೇ ಕೊಠಡಿಯಲ್ಲಿ ಮೂರು ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿರುವುದರಿಂದ ಒಂದು ತರಗತಿಯನ್ನು ಕೊಠಡಿಯಲ್ಲಿ ನಡೆಸಿದರೆ ಉಳಿದ ಎರಡು ತರಗತಿಗಳನ್ನು ಮಠದ ಆವರಣದ ಮರದ ಕೆಳಗೆ ನಡೆಸಲಾಗುತ್ತಿದೆ.

 

ಮೂಲಸೌಲಭ್ಯದ ಕೊರತೆ; ಸುರಕ್ಷತೆಯ ಕ್ರಮಗಳಿಲ್ಲ:
ಮಠದ ಆವರಣದಲ್ಲಿ ಮೂರು ತರಗತಿಗಳು ನಡೆಯುತ್ತಿದೆ. ಆದರೆ, ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಸಂಜೆಯವರೆಗೂ ಮಲ-ಮೂತ್ರ ವಿಸರ್ಜನೆ ಮಾಡದೇ ಮಕ್ಕಳು ಪಾಠ ಕೇಳಬೇಕಾಗಿದೆ. ತೀರಾ ಅನಿವಾರ್ಯ ಎನಿಸಿದಾಗ ಮಕ್ಕಳನ್ನು ಮಠಕ್ಕೆ ಹೊಂದಿಕೊಂಡಿರುವ ಪಂಪ್‍ಹೌಸ್ ಆವರಣದಲ್ಲಿಯೇ ಬಯಲು ಶೌಚಕ್ಕೆಂದು ಕಳುಹಿಸಲಾಗುತ್ತದೆ. ಇಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳು ಇಲ್ಲದಿರುವುದರಿಂದ ಮಕ್ಕಳ ಜೀವಕ್ಕೆ ಬೆಲೆಯೇ ಇಲ್ಲ ಎನ್ನುವಂತಾಗಿದೆ.

ಪಂಪ್ ಹೌಸ್ ಆವರಣ ಹಾಗೂ ಪಕ್ಕದಲ್ಲೇ ಇರುವ ಸ್ಮಶಾನ ಜಾಗದಲ್ಲಿ ಗಿಡಗಂಟೆಗಳು ಬೆಳೆದಿದ್ದು, ಹುಳಹುಪ್ಪಡಿಗಳ ಹಾವಳಿ ಹೆಚ್ಚಾಗಿರುವುರದಿಂದ ಮಕ್ಕಳು ಅಲ್ಲಿ ಬಯಲುಶೌಚ ಮಾಡಲೂ ಹಿಂಜರಿಯುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದೇ ಇರುವುದರಿಂದ ಮಕ್ಕಳೇ ಮನೆಯಿಂದ ನೀರು ತಂದು ಕುಡಿಯಬೇಕಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಅರ್ಧ ಕಿಲೋಮೀಟರ್ ನಡೆಯಬೇಕು:
ಮಠದ ಆವರಣದಲ್ಲಿ ನಡೆಯುವ ಮೂರು ತರಗತಿಗಳ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ ಕಟ್ಟಡ ನಿರ್ಮಾಣವಾಗುತ್ತಿರುವ ಶಾಲೆಯ ಬಳಿಯೇ ಹೋಗಬೇಕು. ಮಠದ ಆವರಣದಿಂದ ಶಾಲೆಗೆ ಸುಮಾರು ಅರ್ಧ ಕಿಲೋಮೀಟರ್‍ನಷ್ಟು ದೂರವಿದ್ದು, ಮಧ್ಯಾಹ್ನ ಶಿಕ್ಷಕರು ಮಕ್ಕಳನ್ನು ಸಾಲು ಮಾಡಿ ಕರೆದುಕೊಂಡು ಊಟ

 

 

ಮಾಡಿಸಿಕೊಂಡು ಮತ್ತೆ ಮಠದ ಆವರಣಕ್ಕೆ ಕರೆತಂದು ತರಗತಿಗಳನ್ನು ನಡೆಸಬೇಕಿದೆ. ಹೀಗೆ ಆ ಶಾಲೆಯಿಂದ ಈ ಶಾಲೆಗೆ ಮಕ್ಕಳು ಓಡಾಡಬೇಕಿರುವುದು ರಾಷ್ಟ್ರೀಯ ಹೆದ್ಧಾರಿಯಲ್ಲಾಗಿದ್ದು, ವಾಹನಗಳ ದಟ್ಟಣೆ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ಮಕ್ಕಳಿಗೆ ಊಟ ಮಾಡಿಸಲೂ ಶಿಕ್ಷಕರು ಅಪಾಯವನ್ನು ಕೈಯಲ್ಲಿಡಿದುಕೊಂಡೇ ಓಡಾಡುವಂತಾಗಿದೆ.

ಕುಸಿಯುತ್ತಿದೆ ಮಕ್ಕಳ ದಾಖಲಾತಿ ಪ್ರಮಾಣ:
ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೂ ಶಿಕ್ಷಣ ನೀಡಲಾಗುತ್ತಿದ್ದು, ಕಳೆದ ವರ್ಷ 150ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು. ಶಾಲಾ ಕಟ್ಟಡ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಂಡಿರುವುದು ಮತ್ತು ಸುರಕ್ಷತೆಯಿಲ್ಲದ ಜಾಗದಲ್ಲಿ ತರಗತಿಗಳನ್ನು ನಡೆಸುತ್ತಿರುವುದರಿಂದ ಹಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದಾಗಿ ಈಗ ಶಾಲೆಯಲ್ಲಿ ಕೇವಲ 110 ಮಕ್ಕಳು ಹಾಜರಾಗುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ‘ಸಾತ್ವಿಕ ನುಡಿ’ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರನ್ನು ಸಂಪರ್ಕಿಸಿದಾಗ; ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ಹೇಳಿದ್ದಾರೆ. ಆದರೆ, ಆಮೆಗತಿಯಲ್ಲಿ ಸಾಗುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯ ಬಗ್ಗೆಯಾಗಲೀ ಮಕ್ಕಳಿಗೆ ಸುರಕ್ಷಿತ ಸ್ಥಳದಲ್ಲಿ ಶಿಕ್ಷಣ ಒದಗಿಸುವ ಬಗ್ಗೆಯಾಗಲೀ ಏನೂ ಹೇಳಲಿಲ್ಲ.